ದೇವಸ್ಥಾನದ ದರ್ಶನ ಸಮಯಗಳು

ದೇವಸ್ಥಾನದ ದರ್ಶನ ಸಮಯಗಳು

  • ಬೆಳಿಗ್ಗೆ 5:30 ರಿಂದ12:30
  • ಸಂಜೆ 4:00 ರಿಂದ 8:30 (ವಿಶೇಷ ದಿನಗಳನ್ನು ಹೊರತುಪಡಿಸಿ)

ಬೆಳಿಗ್ಗೆ 5:30 ರಿಂದ 6:30 : ಮಲಾಪಕರ್ಷಣ ಸ್ನಾನದ ಬಳಿಕ ಉಷಃಕಾಲ, ಅರುಣೋದಯ ಪೂಜೆ ನಂತರ ಪಂಚಾಮೃತ, ಕಲಶ, ಅಲಂಕಾರ, ಪ್ರಾತಃಕಾಲ ಪೂಜೆಗಳು
ಮಧ್ಯಾಹ್ನ 11:30 ರಿಂದ 12:30 : ಮಹಾ ಪೂಜೆ
ರಾತ್ರಿ 7:00 ರಿಂದ 7:30 : ರಾತ್ರಿ ಮಹಾ ಪೂಜೆ

ಪ್ರಧಾನ ಮೂರ್ತಿ : ದೇವಸ್ಥಾನದಲ್ಲಿರುವ ಪ್ರಧಾನ ಮೂರ್ತಿ ಅನಂತಪದ್ಮನಾಭ ಸ್ವಾಮಿಯದು. ಕರಿಕಲ್ಲಿನಲ್ಲಿ ಕಟೆದ ಸುಮಾರು ಎರಡೂವರೆ ಅಡಿ ಎತ್ತರದ ಶಿಲಾ ವಿಗ್ರಹ. ಅಭಯಹಸ್ತದಿಂದ ಚಕ್ರಶಂಖಗದಾಪದ್ಮಧಾರಿಯಾಗಿ ನಿಂತ ಭವ್ಯ ಮೂರ್ತಿ.

ಬಲಿಮೂರ್ತಿ : ಅನಂತಪದ್ಮನಾಭ ಸ್ವಾಮಿಯ ಮೂಲಬಿಂಬದ ಎಡಬಲದಲ್ಲಿ ಎರಡು ಮೂರ್ತಿಗಳಿವೆ. ಮೂಲಬಿಂಬದ ಲಕ್ಷಣಗಳನ್ನು ಗಮನಿಸಿ ಬಲಿಮೂರ್ತಿಯನ್ನು ಕಲ್ಪಿಸಲಾಗಿದೆ. ಎಡಗಡೆಯದು ಹಳೆಯದು, ಬಲಬದಿಯದು ಹೊಸತು. ಪದ್ಮದ ಮೇಲೆ ನಿಂತ ಭಂಗಿ, ನಾಭಿಯಲ್ಲಿ ಪದ್ಮ, ಕರದಲ್ಲಿ ಪದ್ಮ, ಶೇಷ ಛತ್ರವಿದೆ. ಹೊಸ ಬಲಿ ಮೂರ್ತಿಯನ್ನು ತುಂಬಾ ಕಲಾತ್ಮಕವಾಗಿ ತಯಾರಿಸಲಾಗಿದೆ. ವೃತ್ತಾಕಾರ ತಿರುಗಬಲ್ಲ ಈ ಮೂರ್ತಿ ಮೇಲೆ ಎತ್ತಲು ಬರುವುದಿಲ್ಲ, ಅಲ್ಲದೆ ಒಂದು ತೊಟ್ಟು ನೀರೂ ಪೀಠದ ಒಳಗೆ ಇಳಿಯುವುದಿಲ್ಲ.

ರುದ್ರದೇವಸ್ಥಾನವೂ ಈ ದೇವಸ್ಥಾನದ ಒಳಗೆ ಸೇರಿದುದರಿಂದ ರುದ್ರಲಿಂಗವನ್ನು ಇಲ್ಲಿ ಇಡಲಾಗಿದೆ. ಗರ್ಭಗುಡಿಯ ಆಗ್ನೇಯ ದಿಕ್ಕಿನಲ್ಲಿರುವ ರುದ್ರಲಿಂಗಕ್ಕೆ ಮಧ್ಯಾಹ್ನ ಕಾಲದಲ್ಲಿ ಪರಮಾನ್ನ, ನೈವೇದ್ಯ, ಭಕ್ಷ್ಯ ಗಳನ್ನು ಪ್ರತಿದಿನವೂ ಅರ್ಪಿಸಿ ಪೂಜಿಸಲಾಗುತ್ತದೆ.

ತೀರ್ಥಮಂಟಪದ ಕಂಬವೊಂದರಲ್ಲಿ ಗಣಪತಿ ದೇವರ ಸಾನ್ನಿಧ್ಯವಿದೆ ಎಂಬ ನಂಬಿಕೆಯಿದೆ. ಪ್ರತಿ ದಿನ ಪ್ರಾತಃಕಾಲ ಗಣಪತಿಗೆ ಪೂಜೆ ಸಲ್ಲಿಸಿ ಆಮೇಲೆಯೇ ಗರ್ಭಗುಡಿಯಲ್ಲಿರುವ ಮೂಲಮೂರ್ತಿಗೆ ಪೂಜೆ ಸಲ್ಲಿಸಲಾಗುತ್ತದೆ. ಹಾಗೆಯೇ ದೇವಸ್ಥಾನದ ಧ್ವಜಮರದಂಗಣಕ್ಕೆ ತಾಗಿ ಈಶಾನ್ಯ ದಿಕ್ಕಿನಲ್ಲಿ ಖಡ್ಗರಾವಣನ ಮತ್ತು ಬೊಬ್ಬರ್ಯನ ಸ್ಥಾನವಿದೆ. ಹಾಗೆಯೇ ದೇವಸ್ಥಾನದ ಹಿಂಬದಿಯಲ್ಲಿ ಪಂಜುರ್ಲಿ ಮತ್ತು ನಂದಿಗೋಣನ ಸ್ಥಾನಗಳಿವೆ. ಹೊರಾಂಗಣದಲ್ಲಿ ದೇವಸ್ಥಾನದ ಪೂರ್ವ ದಿಕ್ಕಿನಲ್ಲಿ ನಾಗಬ್ರಹ್ಮಸ್ಥಾನವಿದೆ. ನೈಋತ್ಯ ದಿಕ್ಕಿನಲ್ಲಿ ರಕ್ತೇಶ್ವರಿ, ನಂದಿಗೋಣ ಗುಡಿಯಿದೆ. ಅಲ್ಲೇ ಹತ್ತಿರದಲ್ಲಿ ತಾಮಸ ಗುಣದ ಪಂಜುರ್ಲಿ ಗರಡಿಯೂ ಇದೆ. ವಾಯುವ್ಯ ದಿಕ್ಕಿನಲ್ಲಿ ಬೊಬ್ಬರ್ಯ ಸ್ಥಾನವಿದೆ - ಸೂರಾಲಿನ ಅರಸ ದೇವರಿಗೆ ಆಭರಣ ಅರ್ಪಿಸಿದ ಸಂದರ್ಭದಲ್ಲಿ ಆಭರಣದೊಂದಿಗೆ ಬಂದ ಈ ಬೊಬ್ಬರ್ಯನನ್ನು ಇಲ್ಲಿಯೇ ಪ್ರತಿಷ್ಠಾಪಿಸಲಾಯಿತೆಂದು ಹೇಳುತ್ತಾರೆ. ಉತ್ತರ ದಿಕ್ಕಿನಲ್ಲಿ ನಾಗಬನವಿದೆ. ಅಲ್ಲದೆ ದೇವಳದ ಅತೀ ಸಮೀಪವಾಗಿ ನಾಲ್ಕು ಕಡೆಗಳಲ್ಲಿ ಉತ್ತರ - ಪೂರ್ವ - ದಕ್ಷಿಣ - ನೈಋತ್ಯ ದಿಕ್ಕಿನಲ್ಲಿ ನಾಗರನ್ನು ಪ್ರತಿಷ್ಠಾಪಿಸಲಾಗಿದೆ. ದೇವಸ್ಥಾನ ಕಟ್ಟಿಸಿ ಉಳಿದ ಹಣವನ್ನು ನಾಲ್ಕು ಕಡೆ ಇಟ್ಟು ನಾಗನನ್ನು ಪ್ರತಿಷ್ಠಾಪಿಸಿದ್ದಾರೆ ಎಂದೂ ಹೇಳುತ್ತಾರೆ.


ನಿತ್ಯಪೂಜೆ

ಅನಂತಪದ್ಮನಾಭ ಸ್ವಾಮಿಗೆ ವಾತುಳ ಆಗಮ ರೀತಿಯಲ್ಲಿ ದೈನಂದಿನ ಪೂಜಾ ವಿನಿಯೋಗಾದಿಗಳು ನಡೆಯುತ್ತವೆ. ಪ್ರತಿದಿನ ಬೆಳಗ್ಗೆ ಮೂರು ಬಗೆಯ ಪೂಜೆಗಳು, ಮಧ್ಯಾಹ್ನ ನಾಲ್ಕು ಬಗೆಯ ಪೂಜೆಗಳು, ರಾತ್ರಿ ಎರಡು ಬಗೆಯ ಪೂಜೆಗಳು ಹೀಗೆ ದಿನದಲ್ಲಿ ಒಂಭತ್ತು ಬಗೆಯ ಪೂಜೆಗಳಿವೆ.

ಮಲಾಪಕರ್ಷಣ ಸ್ನಾನದ ಬಳಿಕ ಉಷಃಕಾಲ, ಅರುಣೋದಯ, ಪ್ರಾತಃಕಾಲ ಪೂಜೆಗಳು : ಪಂಚಾಮೃತ, ಕಲಶ, ಅಲಂಕಾರ, ಮಹಾಪೂಜಾ: ರಾತ್ರಿ ಪೂಜಾ, ಪೀಠಪೂಜಾ - ಇವು ಪ್ರಧಾನ ಪೂಜೆಗಳು, ಸಹಸ್ರನಾಮ ಪೂಜಾ, ದೀಪಹಚ್ಚಿದೊಡನೆ ನಡೆಯುವ ದೀಪ ಪೂಜಾ ಇವುಗಳೆಲ್ಲ ಉಪಪ್ರಧಾನವಾದವುಗಳು.

ಪರಿಸರದಲ್ಲೆಲ್ಲ ಅತಿ ಶ್ರೀಮಂತ ದೇವರೆಂದು ಪರಿಗಣಿಸಲ್ಪಟ್ಟ ಶ್ರೀಸ್ವಾಮಿಗೆ ಈಗಿನ ಲೆಕ್ಕಾಚಾರದಂತೆ ಪ್ರತಿದಿನ ಪೂಜೆಗೆ ಕನಿಷ್ಟ ಐನೂರು ರೂಪಾಯಿಗಳಾದರೂ ಬೇಕು. ಈಗ ಭಕ್ತರ ಅನುಕೂಲಕ್ಕಾಗಿ ಮಧ್ಯಾಹ್ನ ಪೂಜಾ ವೆಚ್ಚದ ಒಂದಂಶವೆಂದು ರೂ. 100 ಬಡ್ಡಿ ಬರುವ ಹಾಗೆ ಮೂಲಧನವಾಗಿ ರೂ. 1000ವನ್ನು ಶಾಶ್ವತ ಠೇವಣಿಯಾಗಿಡುವ ಯೋಜನೆ ಹಮ್ಮಿಕೊಳ್ಳಲಾಗಿದೆ.

ಆಚಂದ್ರಾರ್ಕ ಪರ್ಯಂತ ಶ್ರೀಸ್ವಾಮಿಯ ಸನ್ನಿಧಿಯಲ್ಲಿ ವರ್ಷದಲ್ಲೊಂದು ದಿನ ನಿತ್ಯಪೂಜೆಯ ಭಾಗ್ಯ ಪಡೆಯಲು ಭಕ್ತರಿಗೆ ಇದೊಂದು ಅಪೂರ್ವ ಅವಕಾಶ.

ದೇವಸ್ಥಾನದಲ್ಲಿ ಪ್ರತಿದಿನವೂ ಪರಸ್ಥಳದವರಿಗೆಂದು ಎಂಟು ಮಂದಿ ಬ್ರಾಹ್ಮಣರಿಗೆ ಮೃಷ್ಟಾನ್ನವಿರುತ್ತದೆ. ಅಲ್ಲದೆ ಪ್ರತಿ ಸಂಕ್ರಾಂತಿ ಸಮಾರಾಧನೆಯು ಪರಸ್ಥಳದ ಬ್ರಾಹ್ಮಣರಿಗೆ ಮಹಾಪೂಜೆಯ ಬಳಿಕ ಸರದಿ ಅರ್ಚಕರ ಮನೆಯಲ್ಲಿ ನಡೆಯುತ್ತದೆ.