ದೇವಸ್ಥಾನದ ಇತಿಹಾಸ
ಪೆರ್ಡೂರು ಶ್ರೀ ಅನಂತಪದ್ಮನಾಭ ದೇವಸ್ಥಾನ
ಶ್ರೀಕ್ಷೇತ್ರ ಪೆರ್ಡೂರು
ಪೆರ್ಡೂರು - ಇದು ಪುಣ್ಯಭೂಮಿ. ಹುಲಿ-ಹಸು ಎಂದಿನ ವೈರ ಮರೆತು ಜತೆಯಾಗಿದ್ದ ನಿರ್ವೈರ ಸ್ಥಳವಿದು. ಹಿಂಡಿನಲ್ಲಿ ಕಾಣದಾಗಿದ್ದ ಹಸುವನ್ನು ಹುಡುಕುತ್ತಾ ಬಂದ ಯುವಕನೋರ್ವ ಹುತ್ತಕ್ಕೆ ಹಾಲು ಸುರಿಸುತ್ತಾ ನಿಂತಿದ್ದ ಕಪಿಲೆ ಹಸುವನ್ನು ಕಂಡು ಸಂತೋಷಾತಿರೇಕದಿAದ ‘ಪೇರ್ ಉಂಡು, ಪೇರ್ ಉಂಡು' (ಹಾಲಿದೆ, ಹಾಲಿದೆ) ಎಂದು ಕೂಗಿದ ತಾಣವಿದು. ಹುತ್ತವಿದ್ದ ಜಾಗದಲ್ಲಿಯೇ ಅನಂತಪದ್ಮನಾಭ ಸ್ವಾಮಿಯ ಪ್ರತಿಷ್ಠೆಯಾಗಿ ಭಕ್ತಜನರಿಂದ ನಿತ್ಯಪೂಜೆಗೊಳ್ಳುತ್ತಿರುವ ದಿವ್ಯಕ್ಷೇತ್ರವಿದು.
ಹುತ್ತದೊಳಗಿಂದ ಹುಟ್ಟಿ ಅಂದರೆ ಅನಂತದಿAದ ಆವಿರ್ಭವಿಸಿ ಅನಂತಪದ್ಮನಾಭನೆAದು ಕರೆಸಿಕೊಂಡು ಪ್ರಕೃತಿಯ ಎಲ್ಲ ಶಕ್ತಿಯನ್ನೂ ಮೈಗೂಡಿಸಿಕೊಂಡ ಈ ಸ್ವಾಮಿ ಪ್ರತೀ ತಿಂಗಳು ಸಂಕ್ರಮಣದ ಪರ್ವದಿನದಂದು ವಿಶೇಷವಾಗಿ ಪೂಜೆಗೊಳ್ಳುತ್ತಿದ್ದಾನೆ.
ಉಡುಪಿ ಜಿಲ್ಲೆಯ ಉಡುಪಿ ತಾಲೂಕಿನಲ್ಲಿದೆ ಪೆರ್ಡೂರು ಗ್ರಾಮ. ಶ್ರೀಕ್ಷೇತ್ರಸ್ವಾಮಿ ಅನಂತಪದ್ಮನಾಭ ದೇವಸ್ಥಾನದಿಂದಾಗಿಯೇ ಈ ಊರು ಅಂದೂ - ಇಂದೂ ನಾಡಿನ ಜನರಿಗೆ ಚಿರಪರಿಚಿತವಾಗಿರುವುದು.

ಪೂರ್ವದಲ್ಲಿ ಸಹ್ಯಾದ್ರಿಯ ಪರ್ವತಶ್ರೇಣಿ, ದಕ್ಷಿಣದಲ್ಲಿ ಸುವರ್ಣ ನದಿ, ಪಶ್ಚಿಮದಲ್ಲಿ ಮಡಿಸಾಲು ನದಿ, ಉತ್ತರದಲ್ಲಿ ಸೀತಾನದಿಯೇ ಮೇರೆಯಾಗಿರುವ ಶ್ರೀಕ್ಷೇತ್ರ ಒಂದು ಕಾಲದಲ್ಲಿ ವ್ಯಾಪಾರಕೇಂದ್ರವೂ ಆಗಿತ್ತು. ಶಿವಮೊಗ್ಗ - ತೀರ್ಥಹಳ್ಳಿ ಪಟ್ಟಣಗಳನ್ನು ಹಾದು ಆಗುಂಬೆ ಘಾಟಿ ಇಳಿದು ಬಂದಾಗ ಸಿಗುತ್ತಿದ್ದ ದೊಡ್ಡ ಪಟ್ಟಣ ಪೆರ್ಡೂರು. ಹಾಗೆಯೇ ಈ ಕಡೆಯಿಂದ ಉಡುಪಿ ಪಟ್ಟಣ ದಾಟಿದರೆ ಬಳಿಕ ಪೆರ್ಡೂರೇ ದೊಡ್ಡ ಪಟ್ಟಣವೆನಿಸಿತ್ತು. ಸೇತುವೆಗಳಿಲ್ಲದ ಆ ಕಾಲದಲ್ಲಿ ಮೂರು ಕಡೆಯೂ ಶ್ರೀಕ್ಷೇತ್ರವನ್ನು ನದಿಗಳೇ ಸುತ್ತುವರಿದಿದ್ದರಿಂದ ಆಸುಪಾಸಿನ ಗ್ರಾಮದವರೆಲ್ಲ ದೋಣಿಯಲ್ಲಿಯೇ ಈ ಪಟ್ಟಣಕ್ಕೆ ಬರುತ್ತಿದ್ದರು. ವಾರದ ಸಂತೆಗಳೇ ಇರದಿದ್ದ ಆ ಕಾಲದಲ್ಲಿ ಪೆರ್ಡೂರಿನಲ್ಲಿ ತಿಂಗಳಿಗೊAದು ಸಂಕ್ರಮಣ ಉತ್ಸವ ಜರಗುತ್ತಿತ್ತು. ಮಾರುವ - ಕೊಳ್ಳುವ ಜನರಿಂದ ಗಿಜಿಗಿಜಿಗುಟ್ಟುತ್ತಿತ್ತು.
ಪರಿಸರದ ಹಳ್ಳಿ ಜನರೆಲ್ಲ ಅಂದು ದೇವರ ದರ್ಶನದೊಂದಿಗೆ ತಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳುತ್ತಿದ್ದರು. ಅವಶ್ಯಕತೆಗಳನ್ನೂವೃಷಭ ಸಂಕ್ರಮಣದAದು ಸಂಗ್ರಹಿಸಿಟ್ಟುಕೊಳ್ಳುತ್ತಿದ್ದರು. ಮಳೆಗಾಲದ ಪ್ರಾಕೃತಿಕ ಎಲ್ಲ ವಿಶೇಷಗಳಿಂದ, ಶ್ರೀಸ್ವಾಮಿಯ ದಿವ್ಯ ಸಾನ್ನಿಧ್ಯದಿಂದ ಶ್ರೀಕ್ಷೇತ್ರ ಧಾರ್ಮಿಕ - ವ್ಯಾಪಾರ ಕೇಂದ್ರವಾಗಿಯೂ ಬೆಳೆದಿತ್ತು.
ಉಡುಪಿಯಿಂದ ೨೦ ಕಿ.ಮೀ. ದೂರದಲ್ಲಿ ಆಗುಂಬೆಗೆ ಹೋಗುವ ರಾಜ್ಯ ರಸ್ತೆಯಲ್ಲಿ ಹಾಗೆಯೇ ಆಗುಂಬೆಯಿAದ ೩೨ ಕಿ.ಮೀ. ದೂರದಲ್ಲಿ ಉಡುಪಿಗೆ ಹೋಗುವ ದಾರಿಯಲ್ಲಿ ಸಿಗುತ್ತದೆ ಈ ಪುಣ್ಯಕ್ಷೇತ್ರ ಪೆರ್ಡೂರು. ಉಡುಪಿ ತಾಲೂಕಿನಲ್ಲಿ ಗಾತ್ರದಲ್ಲಿ ಅತೀ ದೊಡ್ಡ ಗ್ರಾಮವಾದ ಪೆರ್ಡೂರು ಬ್ರಹ್ಮಾವರ ವಿಧಾನಸಭಾ ಚುನಾವಣಾ ಕ್ಷೇತ್ರಕ್ಕೂ ಉಡುಪಿ ಲೋಕಸಭಾ ಚುನಾವಣಾ ಕ್ಷೇತ್ರಕ್ಕೂ ಸೇರಿದ ಗ್ರಾಮ.
ಉಡುಪಿ - ಮಣಿಪಾಲ - ಹಿರಿಯಡ್ಕ - ಪೆರ್ಡೂರು - ಹೆಬ್ರಿ; ಶಿವಮೊಗ್ಗ - ಆಗುಂಬೆ - ಹೆಬ್ರಿ - ಪೆರ್ಡೂರು - ಉಡುಪಿ; ಅಜೆಕಾರು - ದೊಂಡೇರAಗಡಿ - ಹರಿಖಂಡಿಗೆ - ಪೆರ್ಡೂರು; ಉಡುಪಿ - ಕಲ್ಯಾಣಪುರ ಸಂತೆಕಟ್ಟೆ - ಕೊಳಲಗಿರಿ - ಹಾವಂಜೆ - ಕುಕ್ಕೆಹಳ್ಳಿ - ಪೆರ್ಡೂರು - ಹೀಗೆ ನಾಲ್ಕು ಮಾರ್ಗಗಳಲ್ಲೂ ಬಸ್ಸುಗಳು ಓಡಾಡುತ್ತಿದ್ದು ಇಲ್ಲಿಗೆ ಉತ್ತಮ ವಾಹನ ಸಂಪರ್ಕ ಸೌಲಭ್ಯವಿದೆ.
ಸ್ಥಳ ಐತಿಹ್ಯ
ತುಳುನಾಡೆಂದು ಕರೆಸಿಕೊಂಡಿದ್ದ ದಕ್ಷಿಣ ಕನ್ನಡ ಜಿಲ್ಲೆಯನ್ನು ಹೊಯ್ಸಳ, ವಿಜಯನಗರ ಸಾಮ್ರಾಟರ ಅಂಕಿತಕ್ಕೊಳಪಟ್ಟು ಕೆಲವಾರು ರಾಜರು ಬಾರಕೂರು, ಮಂಗಳೂರನ್ನು ಕೇಂದ್ರವಾಗಿರಿಸಿಕೊAಡು ಆಳುತ್ತಿದ್ದರು. ಈ ಪೆರ್ಡೂರು ಸೀಮೆ ಬಾರಕೂರಿನ ರಾಜರ ಅಧೀನದಲ್ಲಿತ್ತು. ಪಶ್ಚಿಮ ಘಟ್ಟದ ಕೆಳಗಿನ ನಾಡಾದ ಇದು ಕಾಡಿನಿಂದಾವೃತವಾಗಿತ್ತು. ಕಾಡಿನ ನಡುವೆ ವಿಶೇಷ ಸಾನ್ನಿಧ್ಯವಿರುವ ನಿರ್ವೈರ ಸ್ಥಳದಲ್ಲಿ ಶ್ರೀಸ್ವಾಮಿಯ ಪ್ರತಿಷ್ಠಾಪನೆಯಾಯಿತೆಂದು ಸ್ಥಳಪುರಾಣ ಹೇಳುತ್ತದೆ. ಪದ್ಮಪುರಾಣದಲ್ಲಿ ಉಲ್ಲೇಖವಿರುವ ಶ್ರೀಕ್ಷೇತ್ರದಲ್ಲಿ ೬-೧ನೇ ಶತಮಾನದಲ್ಲಿ ಶ್ರೀಸ್ವಾಮಿಯ ಪ್ರತಿಷ್ಠಾಪನೆಯಾಗಿರಬೇಕೆಂದು ಊಹಿಸಲಾಗಿದೆ. ಅಲ್ಲದೆ ಅಷ್ಟಮಂಗಲ ಪ್ರಶ್ನೆಯಲ್ಲೂ ಒಂದು ಸಹಸ್ರ ವರ್ಷಗಳ ಹಿಂದೆಯೇ ಈ ದೇವಸ್ಥಾನದ ರಚನೆಯಾಗಿರಬೇಕೆಂದೂ ತೋರಿಬಂದಿದೆ.
ಉಡುಪಿಯಿಂದ ಈಶಾನ್ಯದಲ್ಲಿ ಒಂದು ಯೋಜನದೂರದಲ್ಲಿ ‘ಕೋಟಿಕುಂಜ' ವನ್ನು ಆಳುತ್ತಿದ್ದ ರಾಜ ಶಂಕರನು ತನ್ನ ಆಶ್ರಿತನಾದ ಮುನ್ನೂರು ಗ್ರಾಮದ ಕೃಷ್ಣಶರ್ಮನೆಂಬ ಬ್ರಾಹ್ಮಣೋತ್ತಮನು ಕಾಡಿನ ಮಧ್ಯದಲ್ಲಿ ಫಾಲ್ಗುಣ ಮಾಸ ಶುಕ್ಲಪಕ್ಷ ಪ್ರತಿಷ್ಠಾಪಿಸಿದ ಅನಂತಪದ್ಮನಾಭ ಸ್ವಾಮಿಗೆ ಸುಂದರವಾದ ಆಲಯ, ಪ್ರಾಕಾರ, ಕೆರೆ, ಕಟ್ಟಡಗಳನ್ನು ಕಟ್ಟಿಸಿದ್ದಲ್ಲದೆ ನಿತ್ಯಪೂಜೆಗಾಗಿ ಬಣ್ಣಂಪಳ್ಳಿ ಗ್ರಾಮದಲ್ಲಿ ಉಂಬಳಿಬಿಟ್ಟನೆAದೂ ಈಗ ಪ್ರಚಲಿತವಿರುವ ಸ್ಥಳಪುರಾಣ ಹೇಳುತ್ತದೆ.
ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯ ಸ್ವಾಧೀನಕ್ಕೆ ಭಾರತದ ದೇಶೀಯ ಸಂಸ್ಥಾನಗಳು ಬಂದ ಹೊಸದರಲ್ಲಿ ಅಂದರೆ ಇಂದಿಗೆ ಸುಮಾರು ೨೦೦ ವರ್ಷಗಳ ಹಿಂದೆ ಕರ್ನಲ್ ಕಾಲಿಸ್ ಮೆಕೆನ್ಜಿ (೧೭೫೪-೧೮೨೧) ಎಂಬಾತ ಸಂಗ್ರಹಿಸಿದ ದಕ್ಷಿಣ ಕನ್ನಡ ಜಿಲ್ಲೆಯ ಕೈಫಿಯತ್ತಿನಲ್ಲಿ ಪೆರಡೂರು ಮಾಗಣೆಯ ಸಂಕ ಶ್ರೀಕ್ಷೇತ್ರ ಪೆರ್ಡೂರು ೩ ಹೆಗ್ಗಡೆಯ ಆಶ್ರಿತನಾದ ಕೃಷ್ಣ ಹೆಬ್ಬಾರ ಎಂಬವರು ಕ್ರಿ.ಶ. ೧೪೧೯ರಲ್ಲಿ ದೇವರ ಮೂರ್ತಿಯ ಪ್ರತಿಷ್ಠಾಪನೆ ಮಾಡಿದರೆಂದೂ, ಬಳಿಕ ಬಾರಕೂರು ರಾಜ ವಿಜಯಪ್ಪ ಒಡೆಯರು ಈ ದೇವರ ನಂದಾದೀಪ, ಅಮೃತಪಡಿಗೆಂದು ಹೆರಡೆ, ಬಂಣ್ಣAಪಳ್ಳಿ ನಾಡಿನ ೧೨೦ ವರಹ ಬೆಲೆ ಬಾಳುವ ಭೂಮಿಯನ್ನು ಉಂಬಳಿ ಬಿಟ್ಟರೆಂದೂ ಅಂದು ದೇವಸ್ಥಾನದ ಆಡಳಿತ ನೋಡಿಕೊಳ್ಳುತ್ತಿದ್ದ ಮಾಳಿಗೆ ಹೆಬ್ಬಾರ ಅನಂತಯ್ಯ ಮತ್ತು ನೆಲ್ಲಿ ಸುಬ್ಬಯ್ಯ ಎಂಬವರು ಬರೆಸಿದ್ದ ಕೈಫಿಯತ್ತು ನಾಮೆ ಹೇಳುತ್ತದೆ.
ತುಳುನಾಡಿನ ಖ್ಯಾತ ಸಂಶೋಧಕ ದಿ| ಗುರುರಾಜ ಭಟ್ಟರು ತಮ್ಮ 'ಸ್ಟಡೀಸ್ ಇನ್ ತುಳುವ ಹಿಸ್ಟರಿ ಎಂಡ್ ಕಲ್ಚರ್'ನಲ್ಲಿ ಪೆರ್ಡೂರಿನ ಶ್ರೀಸ್ವಾಮಿಯ ವಿಗ್ರಹವು ೧೧-೧೨ನೇ ಶತಮಾನಕ್ಕೆ ಸೇರಿದ್ದಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
'ಪೇರ್ ಉಂಡು ಊರು' - ಪೇರುಂಡೂರು - ಪೆರುಡೂರು - ಪೆರ್ಡೂರು ಆಯಿತೆಂದು ಹಿರಿಯರು ಹೇಳುತ್ತಾರಾದರೂ ಈ ಹೆಸರಿನ ಬಗ್ಗೆ ಮತ್ತೊಂದು ವ್ಯಾಖ್ಯೆಯೂ ಇದೆ. ತುಳುವಿನಲ್ಲಿ ‘ಪೇರ್' ಎಂದರೆ ಎತ್ತರ, ‘ಪೆರಿದ್' ಎಂದರೆ ದೊಡ್ಡದಾದ - ವಿಸ್ತಾರವಾದ - ಅಂದರೆ ಎಸ್ತಾರವಾದ ಎತ್ತರದಲ್ಲಿರುವ ಊರು - ‘ಪೆರಿದ್ - ಊರು' - ಪೆರಿದೂರು - ಪೆರ್ದೂರು - ಪೆರ್ಡೂರು ದಾಗಿರಬಹುದೆAದೂ ಸ್ಥಳನಾಮ ಸಂಶೋಧಕರು ಅಭಿಪ್ರಾಯ ಪಡುತ್ತಾರೆ.
ಒಳಗೆ ಬಾ ಯಾತ್ರಿಕನೆ....
ಪೆರ್ಡೂರು ಗ್ರಾಮದ ಕೇಂದ್ರ ಸ್ಥಾನದಲ್ಲಿರುವುದೇ ಶ್ರೀಸ್ವಾಮಿಯ ದೇವಾಲಯ. ಸುತ್ತಲೂ ರಥಬೀದಿ, ಅಂಗಡಿಗಳು - ಮಳಿಗೆಗಳು. ಪೂರ್ವದಿಕ್ಕಿನಲ್ಲಿರುವ ತಾಮ್ರ ಹೊದಿಸಿದ ಉಪ್ಪರಿಗೆಮಾಡನ್ನೊಳಗೊಂಡ ಬೃಹತ್ ಹೆಬ್ಬಾಗಿಲನ್ನು ದಾಟಿ ಒಳಪ್ರವೇಶಿಸಿದರೆ ಧ್ವಜಮರದ ಅಂಗಣಸುತ್ತು. ಎದುರಿಗೆ ತಾಮ್ರ ಹೊದಿಸಿದ ಬೆಳ್ಳಿಯ ಶಿಖರ ಕಲಶವಿರುವ ೪೫ ಅಡಿ ಎತ್ತರದ ಧ್ವಜಮರ.
ಮಹಾರಥೋತ್ಸವ ಸಮಯ ಬೆಳ್ಳಿಯ ಸುಂದರ ಗರುಡಮೂರ್ತಿಯು ಇದರ ಮೇಲೇರಿ ಸುತ್ತಲೂ ದೃಷ್ಟಿ ಬೀರುತ್ತಾನೆ. ಎಡಬದಿಯಲ್ಲಿ ದೇವರ ವಸಂತಮAಟಪ. ಇದರ ಮಾಡಿಗೂ ತಾಮ್ರ ಹೊದಿಸಲಾಗಿದೆ. ಹಾಗೆಯೇ ಮುಂದುವರಿದಲ್ಲಿ ಎಡಬದಿಯಲ್ಲಿ ಅರ್ಚಕರ, ಉ`ಪಾಧಿವಂತರ ಮನೆಗಳು. ಬಲಬದಿಯಲ್ಲಿ ತಾಮ್ರ ಹೊದಿಸಿದ ದೇವಸ್ಥಾನದ ಪೌಳಿ. ಪೌಳಿಯ ಹೊರ ಬದಿಯಲ್ಲಿ ತಾಮ್ರದ ಮಾಡಿನ ಕೆಳಗಡೆ ಸಿಮೆಂಟಿನಿAದ ಮಾಡಿದ ದಶಾವತಾರದ ಆರು ವಿಗ್ರಹಗಳು. ಈ ದಕ್ಷಿಣ ದಿಕ್ಕಿನಲ್ಲೂ ಅಂಗಣಸುತ್ತಿನಿAದ ಹೊರಗೆ ಹೋಗಲು ಹೆಬ್ಬಾಗಿಲು ಇದೆ. ಮೂಲೆಯಲ್ಲಿ ಅಜಕಾಯಿ ಕಲ್ಲು ನೆಡಲಾಗಿದೆ. ಅದರ ಹಿಂಬದಿಯಲ್ಲಿಯೇ ಪಂಜುರ್ಲಿ, ನಂದಿಗೋಣ ಉಪದೇವತೆಗಳ ಸಾನ್ನಿಧ್ಯವಿದೆ. ಹಾಗೆಯೇ ಪಶ್ಚಿಮ ದಿಕ್ಕಿಗೆ ಬಂದಲ್ಲಿ ಅಲ್ಲಿಯೂ ಹೊರಪೌಳಿಯಲ್ಲಿ ಲಕ್ಷ್ಮೀ, ಗಾಯತ್ರಿ, ಸರಸ್ವತಿ ದೇವಿಯ ಸಿಮೆಂಟಿನ ವಿಗ್ರಹಗಳು; ನಡುವೆ ಶಂಖ - ಚಕ್ರ ವಿಗ್ರಹÀಗಳು. ಪಶ್ಚಿಮ ದಿಕ್ಕಿನಲ್ಲೂ ಹೆಬ್ಬಾಗಿಲು ಇದೆ. ಇದು ರಾಜ್ಯರಸ್ತೆ - ಬಸ್‌ನಿಲ್ದಾಣ ಸೇರಲು ಸನಿಹ ದಾರಿ.
ಹಾಗೆಯೇ ಮುಂದುವರಿದು ದೇವಸ್ಥಾನದ ಉತ್ತರ ಭಾಗಕ್ಕೆ ಬಂದಾಗ ದಶಾವತಾರದ ಉಳಿದ ನಾಲ್ಕು ವಿಗ್ರಹಗಳು ಮತ್ತು ಸ್ಥಳ ಐತಿಹ್ಯದಂತೆ ಹುತ್ತಕ್ಕೆ ಹಾಲು ಸುರಿಸುತ್ತ ನಿಂತಿರುವ ಹಸು ಹಾಗೂ ಹತ್ತಿರವೇ ಮರಿಗಳೊಂದಿಗೆ ಮಲಗಿರುವ ಹುಲಿಯ ಸಿಮೆಂಟಿನ ವಿಗ್ರಹಗಳನ್ನು ಬಲಭಾಗದಲ್ಲಿ ಕಾಣಬಹುದು. ಎಡಭಾಗದಲ್ಲಿ ದೇವಸ್ಥಾನದ ‘ಗೀತಾ ಮಂದಿರ', ಸುಂದರವಾದ ಅಪರೂಪದ ಕಮಾನು, ಉತ್ತರದಿಕ್ಕಿನ ಹೆಬ್ಬಾಗಿಲು ಇದೆ. ಸ್ವಲ್ಪ ಮುಂದೆ ಬಂದಾಗ ಎಡಭಾಗದಲ್ಲಿ ‘ಪದ್ಮತೀರ್ಥ ಮಂಟಪ' ಸಿಗುತ್ತದೆ. ಕೆಳಗೆ ಇಳಿಯಲು ಮೆಟ್ಟಲುಗಳಿವೆ. ಶಿಲೆಕಲ್ಲಿನ ಚಪ್ಪಡಿಗಳನ್ನು ಹಾಸಿ ಸುಂದರವಾಗಿ ರಚಿಸಿದ ಮೆಟ್ಟಲುಗಳು, ನಡುವೆ ವಿಶಾಲವಾದ ಪದ್ಮತೀರ್ಥ. ಪರಿಸರದಲ್ಲೆಲ್ಲೂ ಕಾಣಸಿಗದ ಅಪೂರ್ವ - ವಿಶಾಲವಾದ ಸರೋವರ. ತನ್ನ ಪತಿ ಪದ್ಮನಾಭ ಸ್ವಾಮಿಯೊಂದಿಗೆ ಇರಲು ಹಂಬಲಿಸಿ ಬಂದು ನೆಲೆನಿಂತ ಲಕ್ಷಿö್ಮÃದೇವಿಯ ಆವಾಸಸ್ಥಾನ. ಪದ್ಮತೀರ್ಥದಲ್ಲಿ ಸ್ನಾನ ಮಾಡಿ ಶ್ರೀಸ್ವಾಮಿಯನ್ನು ಪೂಜಿಸಿದಲ್ಲಿ ಇಷ್ಟಾರ್ಥ ನೆರವೇರುವುದಲ್ಲದೆ ಹಲವಾರು ಚರ್ಮರೋಗಗಳೂ ಗುಣವಾಗುತ್ತವೆ. ಅಲ್ಲದೆ ತೀರ್ಥದಲ್ಲಿರುವ ಮೀನುಗಳಿಗೆ ಹುರುಳಿ ಹಾಕುವ ಹರಕೆಗೆ ಮೈಯಲ್ಲಿರುವ ಕಪ್ಪು ಕೆಡುಗಳು, ಮಚ್ಚೆಗಳು ಮಾಯವಾಗುತ್ತವೆ. ಪದ್ಮತೀರ್ಥದ ಮೆಟ್ಟಲಲ್ಲಿ ನಿಂತು ನೇರವಾಗಿ ಮೇಲಕ್ಕೆ ನೋಡಿದಾಗ ಅನಂತಪದ್ಮನಾಭ ಕಲ್ಯಾಣ ಮಂಟಪ, ಅಡಿಗೆ - ಊಟದ ಮನೆಗಳು ಕಣ್ಣಿಗೆ ಬೀಳುತ್ತವೆ. ಕೆರೆದೀಪೋತ್ಸವ ನೋಡಲೆಂದು ಕೆರೆಯ ಸುತ್ತ - ಮುತ್ತ ಯಾತ್ರಿಕರಿಗೆ ನಿಲ್ಲಲು ಯಥೇಚ್ಛ ಜಾಗವಿದೆ.
ಪದ್ಮತೀರ್ಥದಲ್ಲಿ ಸ್ನಾನ ಮಾಡಿ ಇಲ್ಲವೆ ಕೈಕಾಲು ತೊಳೆದು ಮತ್ತೆ ಮುಂದುವರಿದಾಗ ‘ಲಕ್ಷ್ಮೀ ಮಂಟಪ,' ದೇವಸ್ಥಾನದ ಉಗ್ರಾಣ. ಒಂದು ಕಾಲದಲ್ಲಿ ದೇವಸ್ಥಾನಕ್ಕೆ ಗೇಣಿಯಾಗಿ ಬರುತ್ತಿದ್ದ ಸಾವಿರಾರು ಅಕ್ಕಿ ಮುಡಿಗಳನ್ನು ಕೂಡಿಡುತ್ತಿದ್ದ ಜಾಗ. ಉಗ್ರಾಣಕ್ಕೆ ತಾಗಿದಂತೆ ಈಶಾನ್ಯದಲ್ಲಿ ಉಪದೇವತೆ ಖಡ್ಗರಾವಣ, ಬೊಬ್ಬರ್ಯನ ಸಾನ್ನಿಧ್ಯವಿದೆ. ಒಂದು ಕಾಲದಲ್ಲಿ ಖಡ್ಗರಾವಣನ ಸಾನ್ನಿಧ್ಯದಲ್ಲಿ ದರ್ಶನ ಸೇವೆಯೂ ನಡೆಯುತ್ತಿತ್ತಂತೆ.
ಈಗ ಧ್ವಜಮರದ ಅಂಗಣ ದಾಟಿ ಪೌಳಿ ಪ್ರವೇಶಿಸಿದಾಗ ಭವ್ಯ ತೀರ್ಥ ಮಂಟಪ ಸ್ವಾಗತಿಸುತ್ತದೆ. ಸುಂದರ ಕೆತ್ತನೆ ಕೆಲಸಗಳಿರುವ ನಾಲ್ಕು ವಿಭಿನ್ನ ಬಗೆಯ ಕಂಬಗಳು ಮೇಲೆ ಕಲ್ಲಿನ ಹಾಸು. ಮೇಲುಹಾಸಿನಲ್ಲಿ ಕೆತ್ತಿದ ಹನುಮಂತ ದೇವರ ಶಿಲ್ಪ ಸುತ್ತಮುತ್ತಲೂ ಅವಲೋಕಿಸುತ್ತಿರುವಂತಿದೆ. ಅಂದು ದೇವಸ್ಥಾನದ ಆಡಳಿತ ನೋಡಿಕೊಳ್ಳುತ್ತಿದ್ದ ಪಾಟಾಳಿ, ಬೆಳಿರಾಯ, ನೆಲ್ಲಿ, ಹೆಬ್ಬಾರ ಈ ನಾಲ್ಕು ಮನೆತನದ ಮಂದಿ ತೀರ್ಥಮಂಟಪದ ನಾಲ್ಕು ಕಂಬಗಳನ್ನು ಮಾಡಿಕೊಟ್ಟರೆಂದೂ ಪ್ರತೀತಿಯಿದೆ.
ಪೌಳಿಯ ಒಳಸುತ್ತಿನಲ್ಲಿ ನೆಲಕ್ಕೆ ಚಪ್ಪಡಿ ಕಲ್ಲು ಹಾಸಲಾಗಿದೆ. ಹಾಗೆಯೇ ಎಡಕ್ಕೆ ತಿರುಗಿದಾಗ ಶ್ರೀದೇವಿ ಭೂದೇವಿಯರನ್ನೊಳಗೊಂಡ, ನಾಭಿಯಿಂದ ಬ್ರಹ್ಮ ಒಡಮೂಡಿದ ಶ್ರೀಮನ್ನಾರಾಯಣನ ಸುಂದರ ಸಿಮೆಂಟಿನ ವಿಗ್ರಹ ಕಾಣಬರುತ್ತದೆ. ಅಲ್ಲಿಯೇ ಬದಿಯಲ್ಲಿ ಶಿಲಾಶಾಸನಗಳನ್ನು ನಿಲ್ಲಿಸಲಾಗಿದೆ. ಶ್ರೀಕ್ಷೇತ್ರ ಪೆರ್ಡೂರು ೫ ಮುಂದುವರಿದರೆ ಸುತ್ತಲೂ ಬಲಿಕಲ್ಲುಗಳು. ಗರ್ಭಗುಡಿಯ ಈಶಾನ್ಯ ದಿಕ್ಕಿನಲ್ಲಿ ತೀರ್ಥಬಾವಿ, ತುಳಸಿಕಟ್ಟೆ. ತೀರ್ಥಮಂಟಪ ಮತ್ತು ಗರ್ಭಗುಡಿಯ ಮೇಲ್ಗಡೆಯೂ ತಾಮ್ರದ ಹೊದಿಕೆ ಇದೆ. ಗರ್ಭಗುಡಿಯ ಮೇಲ್ಗಡೆ ಹೊರಭಾಗದಲ್ಲಿ ವಿವಿಧ ಭಂಗಿಯ ಮರದ ಮೂರ್ತಿಗಳನ್ನು ಕಟೆದು ನಿಲ್ಲಿಸಲಾಗಿದೆ.
ಈಗ ಜಯ - ವಿಜಯ ದ್ವಾರಪಾಲಕರ ಕಂಚಿನ ಮೂರ್ತಿಯ ಎದುರಿಗೆ ಬಂದಾಗ ಗರ್ಭಗುಡಿಯ ದ್ವಾರದ ಸುತ್ತಲೂ ಕಂಚಿನ ಎರಕದ ದಶಾವತಾರದ ಮೂರ್ತಿಗಳ ಚೌಕಟ್ಟನ್ನು ಕಾಣಬಹುದು. ಒಳಗೆ ಗರ್ಭಗುಡಿಯಲ್ಲಿ ಮಂದಸ್ಮಿತನಾಗಿ ನಿಂತಿರುವ ಚಕ್ರ ಶಂಖ ಗದಾಪದ್ಮಧಾರಿಯಾಗಿರುವ ಅನಂತಪದ್ಮನಾಭ ಮೂರ್ತಿಯನ್ನು ದರ್ಶಿಸುತ್ತೀರಿ. ಆತನ ಇಕ್ಕೆಲಗಳಲ್ಲೂ ಬಲಿಮೂರ್ತಿಗಳು ಇವೆ. ಮುರಕಲ್ಲಿನ ಬಂಡೆಯನ್ನು ಕೊರೆದು ಮಾಡಿದ ಗುಹೆಯಾಕಾರದ ಪ್ರಾಕಾರ. ಇದರ ಪ್ರಾಚೀನತೆಯನ್ನು ಇದರಿಂದಲೇ ಅಳೆಯಬಹುದು. ಶತಮಾನಗಳ ಕಾಲದ ನಂದಾದೀಪ - ಆರತಿಯ ಹೊಗೆಯನ್ನು ತನ್ನಲ್ಲಿ ಕರಗಿಸಿಕೊಂಡು ನಿಂತ ಆ ಗುಹೆಯ ಗೋಡೆಯ ನಡುವೆ ಶ್ರೀಸ್ವಾಮಿಯ ದಿವ್ಯಮೂರ್ತಿ. ಕ್ಷಣಕಾಲ ನಮ್ಮನ್ನೇ ನಾವು ಮರೆಯುವ ದಿವ್ಯ ಅನುಭೂತಿ.
ಪ್ರಧಾನ ಮೂರ್ತಿ
ದೇವಸ್ಥಾನದಲ್ಲಿರುವ ಪ್ರಧಾನ ಮೂರ್ತಿ ಅನಂತಪದ್ಮನಾಭ ಸ್ವಾಮಿಯದು. ಕರಿಕಲ್ಲಿನಲ್ಲಿ ಕಟೆದ ಸುಮಾರು ಎರಡೂವರೆ ಅಡಿ ಎತ್ತರದ ಶಿಲಾ ವಿಗ್ರಹ. ಅಭಯಹಸ್ತದಿಂದ ಚಕ್ರಶಂಖಗದಾಪದ್ಮಧಾರಿಯಾಗಿ ನಿಂತ ಭವ್ಯ ಮೂರ್ತಿ. ಮೂರ್ತಿ ಲಕ್ಷಣವನ್ನು ಗಮನಿಸಿದಾಗ ಇದು ಜನಾರ್ದನ ರೂಪವೆಂದು ತೋರುತ್ತದೆ. ಇದಕ್ಕೆ ತಕ್ಕಂತೆ ೧೪೫೮ರ ಶಿಲಾಶಾಸನದಲ್ಲಿ "ಜನಾರ್ದನ' ದೇವರಿಗೆ ಎಂದೂ ಅದೇ ಶಿಲಾಶಾಸನದ ಕೊನೆಗೆ 'ಅನಂತದೇವ' ಎಂದೂ ಉಲ್ಲೇಖವಿದೆ. ಅಂದರೆ ಆ ಕಾಲದಲ್ಲೇ ಈ ದೇವರಿಗೆ ಎರಡೂ ಹೆಸರಿನಿಂದ ಕರೆಯುತ್ತಿದ್ದರು ಎಂದೂ ಊಹಿಸಬಹುದು. ಅದೇ ೧೫೨೦ರ ಶಿಲಾಶಾಸನದಲ್ಲಿ ಅನಂತಪದ್ಮನಾಭ ಎಂದೇ ಉಲ್ಲೇಖವಿದೆ. ಅಲ್ಲದೆ ಆ ಮೂರ್ತಿಯ ಹಿಂದಿನಿAದ ಬಳಸಿದಂತೆ ಶೇಷ - ಪ್ರತಿಮೆಯ ಶಿರೋಭಾಗದಲ್ಲಿ ಹೆಡೆ.
ಇದನ್ನು ಗಮನಿಸುವಾಗ ಕಲ್ಲಂಗಳ - ಕರ್ಜೆ - ಪುತ್ತಿಗೆ - ಶಿವಪುರ - ಹೊಳೆಗಳಿಂದ ಅವೃತವಾದ ಈ ಪುಣ್ಯಜಾಗದಲ್ಲಿ ಬ್ರಹ್ಮದೇವರ ಅಪೇಕ್ಷೆ ಮೇರೆಗೆ ಕ್ಷೀರಸಾಗರಶಾಯಿ ವಿಷ್ಣು ಎದ್ದುನಿಂತು ಅಭಯವನ್ನಿತ್ತ ನಾರಾಯಣನ ಪದ್ಮನಾಭ ರೂಪ ನೆನಪಾಗುತ್ತದೆ. ಪದ್ಮದ ಮೇಲೆ ನಿಂತು ಪದ್ಮವನ್ನು ಧರಿಸಿ ಪದ್ಮಪ್ರಿಯನಾಗಿ, ಪದ್ಮದಳಾಯಿತ ಕಣ್ಣುಳ್ಳವನೆಂದು ಸ್ತುತಿಸಿದ ರೂಪವನ್ನು ಪದ್ಮನಾಭನೆಂದು ಪ್ರತಿಷ್ಠಾಪಿಸಿದ್ದು ತೀರಾ ಅಪರೂಪ. ಪ್ರಾಯಶಃ ಕರ್ನಾಟಕದಲ್ಲೇ ಬೇರೆಲ್ಲೂ ಕಾಣಸಿಗದು.
ಪ್ರತಿಮಾ ಲಕ್ಷಣ ಗಮನಿಸಿದರೆ ಜನಿವಾರದಂತೆಯೇ ಮೂಗುತಿಯೂ ಮೂರ್ತಿಯಲ್ಲಿದೆ. ಅದ್ದರಿಂದ ಅವಿಭಾಜ್ಯವಾದ ಲಕ್ಷ್ಮಿಯನ್ನು ಮೂಲದಲ್ಲಿಯೇ ಬಿಂಬಿಸಲಾಗಿದೆ.
ನಿಂತ ಭಂಗಿಯಲ್ಲಿರುವ ಶ್ರೀ ಸ್ವಾಮಿಯ ಮೂರ್ತಿಯ ತಲೆಯ ಮೇಲ್ಗಡೆ ಸುತ್ತ ನಾಗಹೆಡೆ, ನಾಭಿಯಲ್ಲಿ ಪದ್ಮದ ಚಿಹ್ನೆಗಳಿವೆ. ಅನಂತನೆAದರೆ ಹುತ್ತ - ಹಾವು. ಈತನನ್ನು ಒಡಗೂಡಿಕೊಂಡೇ ಪದ್ಮನಾಭ ಭಕ್ತರನ್ನು ಉದ್ಧರಿಸಲು ಇಲ್ಲಿ ನೆಲೆೆನಿಂತಿದ್ದಾನೆ. ಹಿಂದಿನ ಕಾಲದಲ್ಲಿ ತಿರುಪತಿ ತಿಮ್ಮಪ್ಪನ ಹರಕೆಗಳು, ಮಂಜುನಾಥನ ಕಾಣಿಕೆಗಳು ಇಲ್ಲೂ ಸಲ್ಲುತ್ತಿದ್ದುವಂತೆ. ಅಂತಹ ಶಕ್ತಿವಂತ ಕಾರಣಿಕ ಸ್ವಾಮಿ ಈ ಪದ್ಮನಾಭ ಎನ್ನುತ್ತಾರೆ ಭಕ್ತ ಮಂದಿ.
ಬಲಿಮೂರ್ತಿ
ಅನಂತಪದ್ಮನಾಭ ಸ್ವಾಮಿಯ ಮೂಲಬಿಂಬದ ಎಡಬಲದಲ್ಲಿ ಎರಡು ಮೂರ್ತಿಗಳಿವೆ. ಮೂಲಬಿಂಬದ ಲಕ್ಷಣಗಳನ್ನು ಗಮನಿಸಿ ಬಲಿಮೂರ್ತಿಯನ್ನು ಕಲ್ಪಿಸಲಾಗಿದೆ. ಎಡಗಡೆಯದು ಹಳೆಯದು, ಬಲಬದಿಯದು ಹೊಸತು. ಪದ್ಮದ ಮೇಲೆ ನಿಂತ ಭಂಗಿ, ನಾಭಿಯಲ್ಲಿ ಪದ್ಮ, ಕರದಲ್ಲಿ ಪದ್ಮ, ಶೇಷ ಛತ್ರವಿದೆ. ಹೊಸ ಬಲಿ ಮೂರ್ತಿಯನ್ನು ತುಂಬಾ ಕಲಾತ್ಮಕವಾಗಿ ತಯಾರಿಸಲಾಗಿದೆ. ವೃತ್ತಾಕಾರ ತಿರುಗಬಲ್ಲ ಈ ಮೂರ್ತಿ ಮೇಲೆ ಎತ್ತಲು ಬರುವುದಿಲ್ಲ, ಅಲ್ಲದೆ ಒಂದು ತೊಟ್ಟು ನೀರೂ ಪೀಠದ ಒಳಗೆ ಇಳಿಯುವುದಿಲ್ಲ.
ರುದ್ರ ಶಕ್ತಿ ಮತ್ತು ಕಾನದಪಾಡಿ
ರುದ್ರದೇವಸ್ಥಾನವೂ ಈ ದೇವಸ್ಥಾನದ ಒಳಗೆ ಸೇರಿದುದರಿಂದ ರುದ್ರಲಿಂಗವನ್ನು ಇಲ್ಲಿ ಇಡಲಾಗಿದೆ ಎಂದು ಹೇಳುತ್ತಾರೆ. ಇಲ್ಲಿ ಮತ್ತೊಂದು ಕಥೆಯೂ ಪ್ರಚಲಿತದಲ್ಲಿದೆ: ಹತ್ತಿರದ ‘ಕಾನದಪಾಡಿ' ಎಂಬಲ್ಲಿ ಎತ್ತರದಲ್ಲಿ ರುದ್ರ ದೇವಸ್ಥಾನವೊಂದಿದ್ದು ಕಾಲಕ್ರಮೇಣ ಆಡಳಿತ ವರ್ಗ ಮತ್ತು ಅರ್ಚಕರ ನಡುವೆ ವೈಮನಸ್ಸು ಬಂದು ಅರ್ಚಕರು ದೇವಸ್ಥಾನ ಬಿಟ್ಟು ತೆರಳಿದರೆಂದೂ ದೇವಸ್ಥಾನ ಪಾಳುಬಿದ್ದು ಕಾಲಗರ್ಭಕ್ಕೆ ಸಂದಿತೆAದೂ ಆದರೆ ಅಲ್ಲಿನ ಶಕ್ತಿ ಸಾನ್ನಿಧ್ಯಗಳು ಊರಿಗೆ ಗೋಚರಿಸಿದಾಗ ಊರ ಮಂದಿಯ ಪ್ರಾರ್ಥನೆ ಮೇರೆಗೆ ಈ ದೇವಸ್ಥಾನದಲ್ಲಿ ಆ ಸಾನ್ನಿಧ್ಯವನ್ನು ಲಿಂಗರೂಪದಲ್ಲಿ ತಂದು ಪೂಜಿಸಲಾಗುತ್ತಿದೆಯೆಂದೂ ಹೇಳುತ್ತಾರೆ. ಅಂತೂ ಗರ್ಭಗುಡಿಯ ಆಗ್ನೇಯ ದಿಕ್ಕಿನಲ್ಲಿರುವ ರುದ್ರಲಿಂಗಕ್ಕೆ ಮಧ್ಯಾಹ್ನ ಕಾಲದಲ್ಲಿ ಪರಮಾನ್ನ, ನೈವೇದ್ಯ, ಭಕ್ಷö್ಯಗಳನ್ನು ಪ್ರತಿದಿನವೂ ಅರ್ಪಿಸಿ ಪೂಜಿಸಲಾಗುತ್ತದೆ. ತೀರ್ಥಮಂಟಪದ ಕಂಬವೊಂದರಲ್ಲಿ ಗಣಪತಿ ದೇವರ ಸಾನ್ನಿಧ್ಯವಿದೆ ಎಂಬ ನಂಬಿಕೆಯಿದೆ. ಪ್ರತಿ ದಿನ ಪ್ರಾತಃಕಾಲ ಗಣಪತಿಗೆ ಪೂಜೆ ಸಲ್ಲಿಸಿ ಆಮೇಲೆಯೇ ಗರ್ಭಗುಡಿಯಲ್ಲಿರುವ ಮೂಲಮೂರ್ತಿಗೆ ಪೂಜೆ ಸಲ್ಲಿಸಲಾಗುತ್ತದೆ. ಹಾಗೆಯೇ ದೇವಸ್ಥಾನದ ಧ್ವಜಮರದಂಗಣಕ್ಕೆ ತಾಗಿ ಈಶಾನ್ಯ ದಿಕ್ಕಿನಲ್ಲಿ ಖಡ್ಗರಾವಣನ ಮತ್ತು ಬೊಬ್ಬರ್ಯನ ಸ್ಥಾನವಿದೆ. ಹಾಗೆಯೇ ದೇವಸ್ಥಾನದ ಹಿಂಬದಿಯಲ್ಲಿ ಪಂಜುರ್ಲಿ ಮತ್ತು ನಂದಿಗೋಣನ ಸ್ಥಾನಗಳಿವೆ. ಹೊರಾಂಗಣದಲ್ಲಿ ದೇವಸ್ಥಾನದ ಪೂರ್ವ ದಿಕ್ಕಿನಲ್ಲಿ ನಾಗಬ್ರಹ್ಮಸ್ಥಾನವಿದೆ. ನೈಋತ್ಯ ದಿಕ್ಕಿನಲ್ಲಿ ರಕ್ತೇಶ್ವರಿ, ನಂದಿಗೋಣ ಗುಡಿಯಿದೆ. ಅಲ್ಲೇ ಹತ್ತಿರದಲ್ಲಿ ತಾಮಸ ಗುಣದ ಪಂಜುರ್ಲಿ ಗರಡಿಯೂ ಇದೆ. ವಾಯುವ್ಯ ದಿಕ್ಕಿನಲ್ಲಿ ಬೊಬ್ಬರ್ಯ ಸ್ಥಾನವಿದೆ - ಸೂರಾಲಿನ ಅರಸ ದೇವರಿಗೆ ಆಭರಣ ಅರ್ಪಿಸಿದ ಸಂದರ್ಭದಲ್ಲಿ ಆಭರಣದೊಂದಿಗೆ ಬಂದ ಈ ಬೊಬ್ಬರ್ಯನನ್ನು ಇಲ್ಲಿಯೇ ಪ್ರತಿಷ್ಠಾಪಿಸಲಾಯಿತೆಂದು ಹೇಳುತ್ತಾರೆ. ಉತ್ತರ ದಿಕ್ಕಿನಲ್ಲಿ ನಾಗಬನವಿದೆ. ಅಲ್ಲದೆ ದೇವಳದ ಅತೀ ಸಮೀಪವಾಗಿ ನಾಲ್ಕು ಕಡೆಗಳಲ್ಲಿ ಉತ್ತರ - ಪೂರ್ವ - ದಕ್ಷಿಣ - ನೈಋತ್ಯ ದಿಕ್ಕಿನಲ್ಲಿ ನಾಗರನ್ನು ಪ್ರತಿಷ್ಠಾಪಿಸಲಾಗಿದೆ. ದೇವಸ್ಥಾನ ಕಟ್ಟಿಸಿ ಉಳಿದ ಹಣವನ್ನು ನಾಲ್ಕು ಕಡೆ ಇಟ್ಟು ನಾಗನನ್ನು ಪ್ರತಿಷ್ಠಾಪಿಸಿದ್ದಾರೆ ಎಂದೂ ಹೇಳುತ್ತಾರೆ.
ಪರಿಸರ
ಒಂದು ಕಾಲದಲ್ಲಿ ದಟ್ಟ ಅರಣ್ಯವಾಗಿದ್ದ ಈ ಜಾಗ ದೇವಸ್ಥಾನ ನಿರ್ಮಾಣವಾದ ಬಳಿಕ ಜನವಸತಿ ಯೋಗ್ಯವಾಯಿತು. ಕಾಡು ಕಡಿದು ನಾಡನ್ನಾಗಿಸಿದರು. ಕಳೆದ ಒಂದು ಶತಮಾನದವರೆಗೂ ದೇವಸ್ಥಾನದ ಎದುರಿಗೆ ವಿಶಾಲವಾದ ಗದ್ದೆಯಿತ್ತು. ಬಳಿಕ ಅದುವೇ ರಥಬೀದಿಯಾಗಿ ಅಂಗಡಿಗಳೆದ್ದುವು. ರಥಬೀದಿಯ ಮೂಲೆಯಲ್ಲಿ ಬ್ರಹ್ಮರಥದ ಕೊಟ್ಟಿಗೆ ಇದೆ. ಇದನ್ನು ಇತ್ತೀಚೆಗೆ ನವೀಕರಿಸಲಾಗಿದೆ. ಆ ಬ್ರಹ್ಮರಥವನ್ನು ಪಳಜೆ ಮಂಜು ಕುಂದ ಹೆಗ್ಡೆಯವರು ದೇವರಿಗೆ ಸಮರ್ಪಿಸಿದ ದಾಖಲೆ ಇದೆ. ಬಳಿಯಲ್ಲಿಯೇ ದೇವಸ್ಥಾನದ ನೇರ ಅಧೀನದಲ್ಲಿ ಕೊಪ್ಪಲದಲ್ಲಿ - ೨.೨೫ ಎಕ್ರೆ ತೆಂಗು - ಕಂಗಿನ ತೋಟವಿದೆ.
ದೇವಸ್ಥಾನದ ಎದುರುಗಡೆ ಆರಾಟೋತ್ಸವ ನಡೆಯುವ ಕಟ್ಟೆ - ಮರ ಬಹು ಪುರಾತನವಾಗಿದೆ. ಅದಕ್ಕಿಂತ ಮುಂದೆ ಇತ್ತೀಚೆಗೆ ಜೀರ್ಣೋದ್ಧಾರಗೊಂಡ ನಾಗಬ್ರಹ್ಮಸ್ಮಾನವಿದೆ. ಅಲ್ಲಿಂದ ನೇರಕ್ಕೆ ಎತ್ತರ ಜಾಗದಲ್ಲಿ ಕುಂಜದಕಟ್ಟೆ. ದೇವರು ವರ್ಷಕ್ಕೊಮ್ಮೆ ಉತ್ಸವ ಸಮಯದಲ್ಲಿ ಅಲ್ಲಿಗೆ ಹೋಗಿ ಸೇವೆ ತೆಗೆದುಕೊಳ್ಳುವ ಪರಿಪಾಠವಿದೆ. ಅಲ್ಲಿ ಹತ್ತಿರದಲ್ಲಿಯೇ ಗ್ರಾಮದೇವತೆ ಮಾರಿಯಮ್ಮನ ಗುಡಿಯಿದೆ.
ಬೆಳಿರಾಯಬೆಟ್ಟು ಗೋಪಾಲಕೃಷ್ಣ ಮಠ, ಹೆಬ್ಬಾರಬೆಟ್ಟು ಹೆಬ್ಬಾರ ಮಠ, ಗೋರೇಲು ನೆಲ್ಲಿಮಠ, ಮಂಚಾರು ಮಠ, ಬಾಳೆಬೈಲು ಮಠ, ಪಡಪಳ್ಳಿ ಮಠ, ಕುಕ್ಕುಂಡಿ ಮಠ, ಹತ್ರಬೈಲು ಮಠ, ಪಾಡಿಗಾರು ಗೋಪಾಲಕೃಷ್ಣ ಮಠ, ಮುಳ್ಳುಗುಡ್ಡೆ ಬನಶಂಕರಿದೇವಿ ಮಠ, ನಾಯಿರಕೋಡು ಮಠ, ವಡ್ಡಮೇಶ್ವರ ಮಠ, ಕಲ್ಲಮಠ, ಸೊನ್ನಂಗಿ ಮಠ, ಕೊÊತ್ಯಾರು ಮಠ, ಸೋಮಯಾಜಿಬೆಟ್ಟು ಮಠ, ಪಳಮಠ, ಅಣ್ಣಾಲು ಮಠ - ಹೀಗೆ ದೇವಸ್ಥಾನದ ಆಸುಪಾಸಿನಲ್ಲಿ ಮಠಗಳಿದ್ದವು. ದೇವಸ್ಥಾನದ ಪಂಚಪರ್ವಾದಿಗಳಿಗೆ ಅಲ್ಲಿಂದ ಜನಬಂದು ಸೇವೆ ಮಾಡುವ ಪರಿಪಾಠವಿತ್ತು. ಆದರೆ ಭೂ ಸುಧಾರಣಾ ಕಾನೂನು ಇವೆಲ್ಲವಕ್ಕೂ ಮಂಗಳ ಹಾಡಿದೆ.
ಇಲ್ಲಿ ಮುತ್ತುರ್ಮೆಯಲ್ಲಿರುವ ‘ಕಮಂಡಲ ತೀರ್ಥ', ಬೆಳಿರಾಯಮಠದ ‘ಯಕ್ಷಿಗುಡಿ' ಕಾರಣಿಕ ಸ್ಥಳಗಳು.