ಶ್ರೀ ಕ್ಷೇತ್ರದಲ್ಲಿ ಜರುಗುವ ಉತ್ಸವಾದಿಗಳ ವಿವರ
ಶ್ರೀ ಕ್ಷೇತ್ರದಲ್ಲಿ ಜರುಗುವ ಉತ್ಸವಾದಿಗಳ ವಿವರ
ಕರಾವಳಿ ಕರ್ನಾಟಕದಲ್ಲಿ ಆಗಮಯುಕ್ತ ಏಕಮೇವ ವಿಷ್ಣು ಸಾನ್ನಿಧ್ಯ ಇದು. 'ವಾತುಳ' ಆಗಮದಲ್ಲಿ ಕಟ್ಟಿರುವ ಈ ದೇವಳದ ಗರ್ಭಗುಡಿ, ಒಳಾಂಗಣ, ಧ್ವಜಮರದಂಗಣ, ರಥಬೀದಿಯ ವಿನ್ಯಾಸ ಅಲ್ಲದೆ ದೇವಸ್ಥಾನವನ್ನೇ ಕೇಂದ್ರವಾಗಿಸಿಕೊಂಡು ಊರು ಬೆಳೆದಿರುವುದು ಬೇರೆಲ್ಲೂ ಕಾಣಸಿಗದು.
'ಮಹತೋಭಾರ' ಎಂದರೆ ನಿತ್ಯ ಬಲಿ, ಪರ್ವ ಉತ್ಸವಗಳಿಂದ ಕೂಡಿದ ಪೂರ್ಣ ಆಗಮ ದೇವಸ್ಥಾನ ಎಂದೇ ಅರ್ಥ, ಶಿವಮುಖದಿಂದ ಆಗತವಾದ ಪೂಜಾ ಪದ್ಧತಿ ಆಗಮ. ಒಟ್ಟು ಇಪ್ಪತ್ತೆಂಟು ವಿಧದ ಆಗಮಗಳಿವೆ ಎನ್ನುವುದೊಂದು ಉಕ್ತಿ. 'ಕಾಮಿಕಂ ಯೋಗಜಂ ಚಿಂತ್ಯಂ ಕಾರಣಂ ತ್ವಜಿತಂ ತಥಾ ದೀಪ್ತಂ ಸೂಕ್ಷ್ಮಂ ಸಹಸ್ರಂಚ ಅಂಶುಮಾನ್ ಸುಪ್ರಬೇಧಕಮ್ ವಿಜಯಂ ಚೈವ ವಿಶ್ವಾಸಂ ಸ್ವಾಯಂಭುವಮಥಾನಕಮ್ ವೀರಂ ಚ ರೌರವಂ ಚೈವ ಮಕುಟಂ ವಿಮಲಂ ತಥಾ ಚಂದ್ರಜ್ಞಾನಮುಖಂ ಬಿಂಬಂ ಪ್ರೋತಂ ಲಲಿತಂ ತಥಾ ಸಿದ್ಧಂ ಸಂತಾನಸರ್ವೋಕ್ತಂ ಪಾರಮೇಶ್ವರ ಏವಚ ಕಿರಣಂ ವಾತುಳಂ ಚೈವ ಅಷ್ಟಾವಿಂಶತಿ ಸಂಹಿತಾ' ಹೀಗೆ 28 ವಿಧದ ಆಗಮಗಳಲ್ಲಿ ವಾತುಳ ಆಗಮ ಒಂದು. ಎಲ್ಲ ಆಗಮ ಪ್ರಕಾರಗಳೂ ಮೂಲತಃ ಒಂದೇ ಆಗಿದ್ದು ಕೆಲವೊಂದು ವಿಧಾನಗಳು ಮತ್ತು ಮಂತ್ರಗಳು ಮಾತ್ರ ವ್ಯತ್ಯಾಸವಾಗಬಹುದು. ವಾತುಳ ಎಂಬ ವೈಷ್ಣವಾಗಮ ಈ ದೇವಸ್ಥಾನಕ್ಕೆ ಸಂಬಂಧಿಸಿದ್ದಾದರೂ ಪ್ರಕೃತ ಈ ಎಲ್ಲ ಆಗಮಗಳನ್ನು ಅಭ್ಯಸಿಸಿ ಕ್ರೋಢೀಕರಿಸಿದ ಕೇರಳೀಯ ಗ್ರಂಥವಾದ ನಾರಾಯಣ ಭಟ್ಟ ವಿರಚಿತ 'ತಂತ್ರಾ ಸಮುಚ್ಚಯಂ' ಎಂಬ ಗ್ರಂಥವೇ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ದೇವಸ್ಥಾನಗಳ ಪೂಜಾ, ಕಲಶ, ಉತ್ಸವಗಳ ವಿಷಯಗಳಲ್ಲಿ ಅಧಿಕಾರದಿಂದ ಕೂಡಿದ ಆಧಾರ ಗ್ರಂಥವಾಗಿದೆ.
ದೇವರ ಉತ್ಸವ ಪಲ್ಲಕಿಗಳು
ದೇವಸ್ಥಾನದ ವಾರ್ಷಿಕ ಮಹೋತ್ಸವ ಸಂದರ್ಭ: ಬಲಿ ಹೊರಟು ಧ್ವಜಾರೋಹಣ ಪರ್ಯಂತ ಮರದ ಪಲ್ಲಕಿ. ಧ್ವಜಾರೋಹಣದ ದಿನ ಶೇಷವಾಹನ. ಸಂಕ್ರಾಂತಿಯಂದು ಗರುಡವಾಹನ ಈ 'ಬಯ್ಯದ ಬಲಿ' ಮೊದಲ್ಗೊಂಡು ಓಕುಳಿ ತನಕ ಬೆಳ್ಳಿಪಾಲಕಿ.
ದೇವರ ರಥಗಳು
ಜಿಲ್ಲೆಯಲ್ಲಿ ದೊಡ್ಡ ರಥವಾಗಿರುವ - ಪಳಜೆ ಮನೆತನದವರು ನೀಡಿದ ಬ್ರಹ್ಮರಥ, ಹಾಗೆಯೇ ಪ್ರತಿ ಸಂಕ್ರಮಣ ಹಾಗೂ ವಿಶೇಷ ಹಬ್ಬದ ದಿನಗಳಲ್ಲಿ ಎಳೆಯುತ್ತಿದ್ದ ಸಣ್ಣ ರಥ, ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ಎಳೆಯುವ ಚಂದ್ರಮಂಡಲ ರಥ.